ಮಾನವ ಜನಾಂಗವು ಕೇವಲ ಆಹಾರ ವಸತಿ ಶಿಕ್ಷಣ ಬಟ್ಟೆ ಈ ಅಗತ್ಯಗಳನ್ನು ಉತ್ಪಾದನೆ ಮತ್ತು ವಿತರಿಸುವ ಕಾರ್ಯಗಳಲ್ಲಿ ತೊಡಗಿದರೆ ಸಾಲದು, ಆದರೆ ಎಲ್ಲಕ್ಕಿಂತ ಮಿಗಿಲಾಗಿ ವ್ಯಕ್ತಿಗಳನ್ನು ಸಂಘಟಿಸಿ ಕ್ರಿಯಾಶೀಲರನ್ನಾಗಿ ಮಾಡಿ ಅವರಿಂದ ಸಮಾಜಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುವಂತೆ ಪ್ರೇರೇಪಿಸಬೇಕು, ಅಂತಹ ಒಂದು ಸಂಘಟನೆಯಲ್ಲಿ ತೊಡಗಿ ಮಲೆನಾಡ ಮಡಿಲಲ್ಲಿ ದಾಪುಗಾಲು ಹಾಕುತ್ತಿರುವ ಸಹಕಾರ ಸಂಸ್ಥೆಯೆಂದರೆ ಪದವೀಧರರ ಸಹಕಾರ ಸಂಘ, ಶಿವಮೊಗ್ಗ.

ಸಹಕಾರಿ ಅರ್ಥ ವ್ಯವಸ್ಥೆಯಲ್ಲಿ ವ್ಯಕ್ತಿಗಳ ಬೆಳವಣಿಗೆಗೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃಧ್ಧಿಗಳನ್ನು ನೆರವೇರಿಸಲು ಸಾಧ್ಯವಾಗಿದೆ ಸದಸ್ಯರ ಆರ್ಥಿಕ ಅಗತ್ಯಗಳನ್ನು ಪೂರೈಸಿ ಅವರು ಕೈಗೊಂಡ ಕಾರ್ಯಕ್ರಮಗಳಿಗೆ ಹಣಕಾಸು ನೆರವು ಒದಗಿಸಿ, ಸದಸ್ಯರ ಸಂಖ್ಯೆ ಹೆಚ್ಚಿಸುವುದರ ಜೆತೆಗೆ ಸಂಘದ ಅಭಿವೃದ್ಧಿಯನ್ನು ಸಹ ಹೆಚ್ಚಿಸಲಾಗಿದೆ, ಅದಕ್ಕೆ ಸದಸ್ಯರು, ಸಿಬ್ಬಂದಿಯವರು ಕೈಜೋಡಿಸಿ ಸಹಕಾರ ಸಂಘದ ಉಪ ನಿಯಮಗಳು ಮಾರ್ಗದರ್ಶಿ, ನಿಯಂತ್ರಣ, ಪ್ರಗತಿಪರ ನಿಯಮಗಳೆಲ್ಲಾ ಸಂಘದ ಆಸ್ತಿ ಎಂದು ತಿಳಿದು ಕ್ರಿಯಾಶೀಲರಾಗಿ ನಡೆದುದರ ಫಲವೇ ಇಂದು ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮಿದೆ.

ಈಗ್ಗೆ 45 ವರ್ಷಗಳ ಹಿಂದೆ ಶಿವಮೊಗ್ಗ ನಗರದ ಪದವೀಧರ ಶಿಕ್ಷಕರು, ವರ್ತಕರು, ವಕೀಲರುಗಳೆಲ್ಲಾ ಸೇರಿ ಮೈಸೂರಿನ ದಿ ಗ್ರಾಜುಯೇಟ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಗಳನ್ನು ಅಭ್ಯಸಿಸಿ, ಶಿವಮೊಗ್ಗ ನಗರದಲ್ಲೊಂದು ಅಂತಹ ಸಹಕಾರ ಸಂಘವನ್ನು ಆರಂಭಿಸಲು ಮುನ್ನುಡಿಯಿಟ್ಟು 1971 ರಲ್ಲಿ ಸಂಘವು ಸ್ಥಾಪನೆಯಾಯಿತು. ಸಂಘದ ನೋಂದಣಿಯ ನಂತರದ ಆರಂಭದ ವರ್ಷದಲ್ಲಿ ಕೇವಲ 163 ಸದಸ್ಯರನ್ನು ಹೊಂದಿ ರೂ. 8276-00 ರೂಪಾಯಿಗಳ ಷೇರು ಬಂಡವಾಳದೊಂದಿಗೆ ನ್ಯಾಯವಾದಿ ಆರ್.ಆರ್. ರುದ್ರಪ್ಪರವರ ಅಧ್ಯಕ್ಷತೆಯೊಂದಿಗೆ ಆರಂಭವಾಯಿತು. ರೂ 1001-00 ಠೇವಣಿ ಸಂಗ್ರಹಣೆ ಹಾಗೂ 5400-00 ಸಾಲ ನೀಡಿಕೆಯಿಂದ ಸಂಘ ಮೊದಲ ಒಂದು ವರ್ಷವನ್ನು ಪೂರೈಸಿತು. ಈ ಅಂಕಿ ಅಂಶಗಳನ್ನು ಇಂದಿನ ಅಂದರೆ 2019 ರ ಮಾರ್ಚ್ ಮಾಹೆಯಲ್ಲಿರುವ ಪ್ರಗತಿಗೆ ಹೋಲಿಸಿದಾಗ ಸದಸ್ಯರ ಸಂಖ್ಯೆ 6295 ಆಗಿದೆ. ಈಗ ಷೇರು ಬಂಡವಾಳ ರೂ 2.36 ಕೋಟಿ, ಠೇವಣಿಗಳ ಸಂಗ್ರಹ  ರೂ. 37.16 ಕೋಟಿ, ನೀಡಿರುವ ಸಾಲ ರೂ. 30.24 ಕೋಟಿ, ಆಪದ್ಧನ ನಿಧಿ ರೂ 1.58 ಕೋಟಿ, ಇತರೇ ನಿಧಿಗಳು 3.92 ಕೋಟಿ, ಒಟ್ಟು ವಹಿವಾಟು 88.68 ಕೋಟಿ, ಒಟ್ಟು ಆದಾಯ 4.53 ಕೋಟಿ ನಿವ್ವಳ ಲಾಭ ರೂ. 1,22,59,946.00 ಗಳಿಸಿರುತ್ತದೆ. ಸಂಘದ ಸದಸ್ಯರ ಸುಸ್ತಿಸಾಲದ ಪ್ರಮಾಣವು (NPA) 0.42% ರಷ್ಟಿರುತ್ತದೆ. ಸದಸ್ಯರಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಕಡಿಮೆ ಬಡ್ಡಿ ದರಗಳಲ್ಲಿ ಸಾಲವನ್ನು ನೀಡಲಾಗುತ್ತಿದೆ. 2002-03 ರಲ್ಲಿ ಸಂಘದ ವ್ಯವಹಾರವನ್ನು ಪೂರ್ಣ ಲ್ಯಾನ್ ಮೂಲಕ ಗಣಕೀಕರಣ ಗೊಳಿಸಲಾಗಿದ್ದು ರಾಜ್ಯದಲ್ಲಿಯೇ ಕನ್ನಡದಲ್ಲಿ ಗಣಕೀಕೃತ ಗೊಳಿಸಿರುವ ಪ್ರಪ್ರಥಮ ಸಂಸ್ಥೆಯಾಗಿರುತ್ತದೆ.